ಇಂಡಿಯನ್ ಅಸೋಸಿಯೇಷನ್ ಫಾರ್ ಎಜುಕೇಷನ್ ಇನ್ ಜರ್ನಲಿಸಂ-
ಈ ಸಂಘ 1955ರ ನವೆಂಬರ್‍ನಲ್ಲಿ ನವದೆಹಲಿಯಲ್ಲಿ ಸ್ಥಾಪಿತವಾಯಿತು. ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿರುವ ಪತ್ರಿಕೋದ್ಯಮ ಇಲಾಖೆಯ ಮುಖ್ಯಾಧಿಕಾರಿಗಳೆಲ್ಲರೂ ಈ ಸಂಸ್ಥೆಯ ಸದಸ್ಯರು. ಪಂಜಾಬ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಇಲಾಖೆಯ ಮುಖ್ಯಸ್ಥ ಪೃಥ್ವಿಪಾಲ್‍ಸಿಂಗರ ಮಾರ್ಗದರ್ಶನ ಈ ಸಂಸ್ಥೆಗೆ ದೊರೆತಿದೆ. ಭಾರತದಲ್ಲಿ ಪತ್ರಿಕೋದ್ಯಮ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವುದು ಮತ್ತು ಪತ್ರಿಕೋದ್ಯಮ ವೃತ್ತಿಯಲ್ಲಿರುವವರಿಗೂ ಪತ್ರಿಕೋದ್ಯಮ ಶಿಕ್ಷಣ ಪಡೆಯುತ್ತಿರುವವರಿಗೂ ಮಧುರಬಾಂಧವ್ಯವನ್ನೇರ್ಪಡಿಸಿ, ವೃತ್ತಿಯ ಘನತೆಯನ್ನು ಎಲ್ಲ ವಿಧಗಳಲ್ಲಿ ಕಾಪಾಡುವುದು ಮತ್ತು ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ಪತ್ರಿಕೋದ್ಯಮ ಶಿಕ್ಷಣದ ಏರ್ಪಾಡಿಗೆ ಸಂಪೂರ್ಣ ಬೆಂಬಲ ಕೊಟ್ಟು, ಪತ್ರಿಕೋದ್ಯಮ ವೃತ್ತಿಯಲ್ಲಿ ಕೆಲಸ ಮಾಡುವವರಿಗೆ ತರಬೇತಿಯ ಅವಕಾಶವನ್ನುಂಟು ಮಾಡಿಕೊಡುವುದು-ಇವೇ ಈ ಸಂಘದ ಮುಖ್ಯ ಉದ್ದೇಶಗಳು. ವರ್ಷಕ್ಕೊಂದು ಸಲ ವಿಶ್ವವಿದ್ಯಾನಿಲಯದ ಕೇಂದ್ರವೊಂದರಲ್ಲಿ ಸಂಘದ ಸಭೆ ಸೇರುತ್ತದೆ. ದೇಶದಲ್ಲಿ ಪತ್ರಿಕೋದ್ಯಮ ಶಿಕ್ಷಣ ಕೊಡುವ ಎಲ್ಲ ವರ್ಗದ ಅಧ್ಯಾಪಕರೂ ಸಂಘದ ಸದಸ್ಯರಾಗಿದ್ದಾರೆ.								
(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ